ಗದಗಿನ ಲಕ್ಕುಂಡಿಯಲ್ಲಿ ಸಿಕ್ಕಿದೆ ಚಿನ್ನದ ನಿಧಿ.
ಗದಗಿನ ಲಕ್ಕುಂಡಿಯಲ್ಲಿ ಚಿನ್ನದ ನಿಧಿ.
ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುತ್ತಿದ್ದ ವೇಳೆ ತಂಬಿಗೆಯೊಂದರಲ್ಲಿ ಸುಮಾರು 470 ಗ್ರಾಂ ಚಿನ್ನಾಭರಣಗಳು ಮತ್ತು ಬಂಗಾರದ ಒಡವೆಗಳಿರುವ ನಿಧಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಎಂಬುವರಿಗೆ ಸೇರಿದ ಜಾಗದಲ್ಲಿ ಈ ನಿಧಿ ಪತ್ತೆಯಾಗಿದೆ. ತಮ್ಮ ಮನೆ ಕಟ್ಟಲೆಂದು ಕಾರ್ಮಿಕರ ಮೂಲಕ ಅಡಿಪಾಯ ತೆಗೆಯುವ ಕಾರ್ಯ ನಡೆಯುತ್ತಿದ್ದಾಗ, ಮಣ್ಣಿನೊಳಗೆ ಹೂತುಹಾಕಲಾಗಿದ್ದ ತಂಬಿಗೆಯೊಂದು ಪತ್ತೆಯಾಗಿದೆ. ತಂಬಿಗೆಯನ್ನು ತೆರೆದಾಗ ಅದರೊಳಗೆ ಕೈಗಡಗ, ಕಂಠಹಾರ, ಕಿವಿಯೋಲೆ, ವಂಕಿಯುಂಗುರ, ನಾಗಮುದ್ರೆಯ ಕಿವಿಯೋಲೆ, ಬಣ್ಣದ ಹರಳುಗಳು, ಗೆಜ್ಜೆ, ಕಡ್ಡಿ, 22 ತೂತು ಬಿಲ್ಲೆ ಹಾಗೂ ಇತರ ಆಭರಣಗಳು ಇರುವುದು ಕಂಡುಬಂದಿದೆ.
ಗಂಗವ್ವ ರಿತ್ತಿ ಅವರು ವಾರದ ಹಿಂದೆಯಷ್ಟೇ ತಮ್ಮ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸಲು ಪಾಯ ತೆಗೆದು ಮತ್ತೆ ಮುಚ್ಚುವಾಗ ಪುತ್ರ ಪ್ರಜ್ವಲ್‌ನಿಗೆ ಈ ತಂಬಿಗೆ ಸಿಕ್ಕಿದೆ. ಆತ ಗ್ರಾ.ಪಂ ಸದಸ್ಯರ ಗಮನಕ್ಕೆ ವಿಷಯ ತಲುಪಿಸಿದ್ದಾನೆ. ನಂತರ ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಅವರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ತಂಬಿಗೆ ಪಂಚನಾಮೆ ಮಾಡಿದರು.